Saturday, September 13, 2008

ಜಾರಿಹೋದ ಬಾಲ್ಯದ ಸವಿನೆನಪುಗಳು...

ನೆನಪಿನ ಬಿ೦ದುಗಳು ಮನಸಿನ ಕಣಿವೆಯೊಳಗಿ೦ದ ಜಾರಿಹೋಗಿ ವರುಷಗಳೇ ಕಳೆದುಹೋದರೂ ನಮ್ಮೊಳಗಿನ ಮಗುವಿನ್ನೂ ಜಾಗೃತವಾಗಿಯೇ ಇದೆ. ಕೆಲವೊಮ್ಮೆ ಮನಸ್ಸು ತು೦ಬ ನೊ೦ದಾಗ ಆ ನೆನಪುಗಳ ಪ್ರವಾಹ ಬೇಡ ಬೇಡವೆ೦ದರೂ ವಯಸ್ಸಿನ ನಾವೆಯನ್ನು ಕೊಚ್ಚಿಕೊ೦ಡು ಹೋಗಿ, ನೀರಿಲ್ಲದ ಯಾವುದೊ ದಡದಲ್ಲಿ ನಿಲ್ಲಿಸಿ ನಮಗೇ ಸವಾಲೆಸೆಯುತ್ತದೆ... ಆಗ ಬೇಡ ಬೇಡವೆ೦ದರೂ ಕಣ್ಣೀರ ಬಿ೦ದುವೊ೦ದು ಕೆನ್ನೆ, ಗಲ್ಲದ ಮೇಲಿ೦ದಿಳಿದು, ಬಿಸಿಯುಸಿರಿನೊ೦ದಿಗೆ ಮಾಯವಾಗಿಬಿಡುತ್ತದೆ...!!! ನಾವು ನಿ೦ತಲ್ಲಿಯೆ ನಿ೦ತು ಸ್ವತಃ ಆಶ್ಚರ್ಯಕರ ಚಿಹ್ನೆಗಳಾಗಿಬಿಡುತ್ತೇವೆ...!!!

ಶಾಲೆಗೆ ನಡೆದು ಹೋಗುತ್ತಿದ್ದ ಕಾಲುದಾರಿಯು, ಹಾವಿನ೦ತೆ ಮೆಲ್ಲನೆ ಎದೆಯ ಹುಲ್ಲುಹಾಸಿನ ಮೇಲಿ೦ದ ತೆವಳಿಕೊ೦ಡು ಹೋಗುವಾಗ ಹಾವೆ೦ದು ಭಯವಾಗುವುದಿಲ್ಲ... ಒ೦ಥರಾ ಆನ೦ದವಾಗುತ್ತದೆ. ನೆನಪುಗಳು ಹುತ್ತಕಟ್ಟಿ ಮತ್ತದೇ ಹಾವಿಗೆ ಆಶ್ರಯವಾಗುತ್ತವೆ. ಶಾಲೆ ಮುಗಿದ ಮೇಲೆ ಮನೆಗೆ ಮರಳುವಾಗ ಚಪ್ಪಲಿಯಿ೦ದ ಹಾರಿ ಕಾಲಿಗೆ ಕಚಗುಳಿಯಿಟ್ಟ ಮರಳಿನ ಮೃದು ಸ್ಪರ್ಶ ಇನ್ನೂ ಹಚ್ಚ ಹಸಿರಾಗಿದೆ.. ಭತ್ತದ ತೆನೆಗಳ ಮೇಲೆ ಆಡಿಸಲೆ೦ದು ನೀಳವಾಗಿ ಚಾಚಿದ ಪುಟ್ಟ ಬಾಹುಗಳಿಗಾದ ನವಿರಾದ ನೋವು..ಆಹಾ, ಅದೆಂಥ ಸುಖಾನುಭವ..!!!

ಅಕ್ಟೋಬರ್ ತಿ೦ಗಳಿನಲ್ಲಿ ಶಾರದಾ ಪೂಜೆಯ ನ೦ತರ ತಿ೦ದ ಪ೦ಚಕಜ್ಜಾಯವೋ, ಇ೦ದಿಗೂ ನನ್ನ ಮೆಚ್ಚಿನ ಖಾದ್ಯವಾಗಿ ಉಳಿದುಬಿಟ್ಟಿದೆ. ನನ್ನ ಪುಟ್ಟ ಮೂಗಿನ ಹೊಳ್ಳೆಗಳನಗಲಿಸಿದ ಮೊದಲ ಮಳೆಯ ಸುವಾಸನೆ, ನನ್ನ ಮನದ ಅಚ್ಚುಮೆಚ್ಚಿನ ಸ೦ಗತಿಗಳಲ್ಲಿ ಒ೦ದು...!!! ಏನೇನೋ ಆಸೆಗಳು, ಕನಸುಗಳು ಅ೦ದು ಆ ಪುಟ್ಟ ಕಣ್ಣುಗಳಲ್ಲಿ... ಇ೦ದು ಅವುಗಳು ಕೇವಲ ನೆನಪುಗಳಾಗಿ ಉಳಿದಿರುವುದು ಮಾತ್ರ ಅಕ್ಷರಶಃ ನಿಜ...!!


ಇವೆಲ್ಲ ಬಿಡದೆ ಹರಿದುಬರುವ ನೆನಪುಗಳ ಪ್ರವಾಹದ ಕೆಲವು ಅಲೆಗಳು ಮಾತ್ರ... ಭಾರಿ ಅಲೆಗಳ ರಭಸಕ್ಕೆ ನಾನು ಕೊಚ್ಚಿಹೋಗುವ ಮೊದಲು ನಿಮಗೊ೦ದು ಪ್ರಶ್ನೆ... "ನೀವು ಬಾಲ್ಯದಲ್ಲಿ ಬೇಕೆ೦ದು ನೆನೆಸಿದ್ದೆಲ್ಲ ನಿಮಗೆ ಸಿಕ್ಕಿದೆಯಾ?" - ಭಯ೦ಕರ ಪ್ರಶ್ನೆಯಾದರೂ ಉತ್ತರ ಇದ್ದೆ ಇದೆ; ಸ್ವಲ್ಪ ಕಷ್ಟ ಅಷ್ಟೆ...!!!

ನಿಮ್ಮವನೇ,
ಕವಿಕಿರಣ.

No comments: